BR PANTHULU: A TIMELESS INSPIRATION

BR PANTALU: A Timeless inspiration

Sripada studios remember India’s eminent filmmaker and actor BR PANTHULU

ಬಡಗೂರು ರಾಮಕೃಷ್ಣಯ್ಯ ಪಂತುಲು ಅಂದರೆ ಬಿ.ಆರ್. ಪಂತುಲು ಅವರು ಜನಿಸಿದ್ದು 1910 ಜುಲೈ 26 ರಂದು ಕೋಲಾರ ಜಿಲ್ಲೆ  ಬಂಗಾರಪೇಟೆಯ ಕುಪ್ಪಂನಲ್ಲಿ. 

ಬಾಲ್ಯದಿಂದಲೇ ನಾಟಕಗಳನ್ನು ನೋಡುವುದು, ಅಭಿನಯಿಸುವುದೆಂದರೆ ಅತೀವ ಆಸಕ್ತಿ, ಅವರ ಊರು ಗಡಿಭಾಗದಲ್ಲಿದ್ದ ಕಾರಣ ಅಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳ ಸತ್ವವನ್ನು ಅರಗಿಸಿಕೊಂಡ ಪಂತುಲು ಮುಂದೆ ಅಷ್ಟೂ ಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರು.

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಪಂತುಲು, ಮಕ್ಕಳಿಗೆ ನಾಟಕ ಕಲಿಸುತ್ತಿದ್ದಾಗ, ಅಲ್ಲಿಗೆ ಬಂದ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ನೋಟೀಸ್  ಜಾರಿ ಮಾಡಿದಾಗ, ಕೂಡಲೇ ತಮ್ಮ ಕೆಲಸಕ್ಕೆ ರಾಜೀನಾಮೆಯನ್ನೇ ಕೊಟ್ಟುಬಿಟ್ಟರು.

ಕಲಾಜಗತ್ತಿಗೆ ಕಾಲಿಟ್ಟಾಗ – ನಂತರ ಕಲೆಯಲ್ಲಿಯೇ ತಮ್ಮ ಮೂಲ ನೆಲೆಯಿರುವುದೆಂದು ಅರಿತು, ಬೆಂಗಳೂರಿಗೆ ಬಂದು ‘ಚಂದ್ರಕಲಾ ನಾಟಕ ಮಂಡಳಿ’ ಯನ್ನು ಸೇರಿ, ಸಣ್ಣ ಪಾತ್ರಗಳನ್ನು ಮಾಡುತ್ತಿದ್ದರು, ಗುಬ್ಬಿ ವೀರಣ್ಣನವರ ‘ಕೃಷ್ಣ ಗಾರುಡಿ’ ಯಲ್ಲಿನ ಧರ್ಮರಾಯ ನ ಪಾತ್ರ ವಹಿಸಿ ಸಾಕಷ್ಟು ಹೆಸರು ಗಳಿಸಿದರು. ಮುಂದೆ ಸ್ವತಃ ತಾವೇ ‘ಕಲಾ ಸೇವಾ ನಾಟಕ ಮಂಡಳಿ’ ಪ್ರಾರಂಭಿಸಿದರು.

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅತ್ಯಂತ ಯಶಸ್ವಿ ನಾಟಕವಾಗಿದ್ದ ‘ಸಂಸಾರ ನಾಕೆ’ ಯನ್ನು ತೆರೆಗೆ ತರಬೇಕೆಂದು ನಿರ್ಧರಿಸಿದವರು ಚೆಟ್ಟಿಯಾರ್ ಸಹೋದರರು, ನಾಟಕವನ್ನು ನಿರ್ದೇಶಿಸಿದ್ದ ಹೆಚ್.ಎಲ್.ಎನ್. ಸಿಂಹ ಅವರ ನಿರ್ದೇಶನದಲ್ಲಿ ‘ದೇವಿ ಫಿಲಂಸ್’ ಲಾಂಛನದಲ್ಲಿ ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ ಮುಂತಾದವರು ನಟಿಸಿದ್ದ, ದಕ್ಷಿಣ ಭಾರತದ ಮೊಟ್ಟಮೊದಲ ಕೌಟುಂಬಿಕ ಚಿತ್ರ ‘ಸಂಸಾರ ನಾಕೆ’ 1936 ರ ಆಗಸ್ಟ್ ನಲ್ಲಿ ತೆರೆಕಂಡು ಭಾರಿಮೊತ್ತದ ಗಳಿಕೆಯ ನಂತರ ತಮಿಳು ಹಾಗೂ ತೆಲುಗುವಿನಲ್ಲಿಯೂ ನಿರ್ಮಿಸಲ್ಪಟ್ಟು ಯಶಸ್ವಿಯಾಯಿತು.

ನಟನೆಯಿಂದ ನಿರ್ಮಾಣ ನಿರ್ದೇಶನಡೆಗೆ –

ಹೀಗೆ ಚಿತ್ರರಂಗಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ ಪಂತುಲು ಅವರು ನಂತರ ಹಲವು ತಮಿಳು ಚಿತ್ರಗಳಲ್ಲಿ ನಟಿಸ ತೊಡಗಿದರು.

ತಾವೇ ಚಿತ್ರ ನಿರ್ಮಾಣ ಮಾಡಬೇಕೆಂದು ನಿರ್ಧರಿಸಿ ಟಿ.ಆರ್. ಮಹಾಲಿಂಗಂ ಅವರ ಜೊತೆಗೂಡಿ ‘ಸುಕುಮಾರ ಪ್ರೊಡಕ್ಷನ್ಸ್’  ಅಡಿಯಲ್ಲಿ ‘ಮಚ್ಚರೇಖಾ’ ಎಂಬ ಚಿತ್ರವನ್ನು ನಿರ್ಮಿಸಿ ಸೋಲನ್ನು ಕಂಡರು.

ಎಂ.ವಿ.ರಾಜಮ್ಮನವರ ನಿರ್ಮಾಣದಲ್ಲಿ ತಯಾರುಗುತ್ತಿದ್ದ  ‘ರಾಧಾರಮಣ’ ಚಿತ್ರದಲ್ಲಿ ನಾಯಕನಟರಾಗಿ ಅಭಿನಯಿಸುತ್ತಿದ್ದಾಗ, ಆ ಚಿತ್ರವು ನಿರ್ದೇಶಕ ಮತ್ತು ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯದಿಂದ ಅರ್ಧಕ್ಕೆ ನಿಲ್ಲುವ ಸಂದರ್ಭ ಬಂದಾಗ ಆ ಚಿತ್ರವನ್ನು ಪೂರ್ಣಗೊಳಿಸಿ ಕೊಟ್ಟಿದ್ದು ಪಂತುಲು ಅವರು. ಹೀಗೆ ಪಂತುಲು ಅವರು ನಿರ್ದೇಶಕರೂ ಆದರು.

1954 ರಲ್ಲಿ ತಮ್ಮ ಬಹುದೊಡ್ಡ ಕನಸಾದ ‘ಪದ್ಮಿನಿ ಪಿಕ್ಚರ್ಸ್’ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು.

ಈ ಸಂಸ್ಥೆಯ ಮೊದಲ ಚಿತ್ರ ‘ಕಲ್ಯಾಣಂ ಪಣ್ಣಿಯೂಮ್ ಬ್ರಹ್ಮಚಾರಿ’ ಯಶಸ್ವಿಯಾದ ಬಳಿಕ ಮತ್ತೊಂದು ಮಹೋನ್ನತ ಚಿತ್ರ ‘ಮೊದಲ ತೇದಿ’ ಪ್ರಾರಂಭವಾಯಿತು, ಇದು ಪಂತುಲು ಅವರು ನಿರ್ದೇಶಿಸಿ ನಿರ್ಮಿಸಿದ ಮೊದಲ ಕನ್ನಡ ಚಿತ್ರ.

ಪ್ರತಿಭಾಪೋಷಕ ಪಂತುಲು –

ಪಂತುಲು ಅವರು ತಮ್ಮ ‘ಪದ್ಮಿನಿ ಪಿಕ್ಚರ್ಸ್’ ಸಂಸ್ಥೆಯಿಂದ ಕನ್ನಡ, ತಮಿಳು, ತೆಲುಗು ಹಾಗು ಹಿಂದಿಯಲ್ಲಿ ಒಟ್ಟಾರೆಯಾಗಿ 57 ಚಲನಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸುವ ಮೂಲಕ ಹಲವು ಅಪ್ರತಿಮ ಪ್ರತಿಭೆಗೆಳು ಚಿತ್ರರಂಗವನ್ನು ಪ್ರವೇಶಿಸಲು ಕಾರಣಕರ್ತರಾದರು.

‘ರತ್ನಗಿರಿ ರಹಸ್ಯ’ ದ ಮೂಲಕ ನಿರ್ದೇಶಕರತ್ನ ಪುಟ್ಟಣ್ಣ ಕಣಗಾಲ್ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದರು, ‘ಸಾಕು ಮಗಳು’ ಮೂಲಕ ಮಿನುಗುತಾರೆ ಕಲ್ಪನಾ, ‘ಚಿನ್ನದ ಗೊಂಬೆ’ ಮೂಲಕ ಜಯಲಲಿತಾ, ‘ದುಡ್ಡೇ ದೊಡ್ಡಪ್ಪ’ ಮೂಲಕ  ಭಾರತಿ  ಹೀಗೆ ಇನ್ನು ಹಲವಾರು ಅದ್ಭುತ ತಂತ್ರಜ್ಞರು, ಕಲಾವಿದರನ್ನು ಗುರುತಿಸಿ, ಕರೆದು ಅವಕಾಶ ನೀಡಿದವರು ಪಂತುಲು ಅವರು.

ಪ್ರಯೋಗಗಳು ಮತ್ತು ಪ್ರಶಸ್ತಿಗಳು  – 

ಪಂತುಲು ಅವರು ನಿರ್ದೇಶಿಸಿ. ನಿರ್ಮಿಸಿದ ಹಲವಾರು ಚಲನಚಿತ್ರಗಳು ಭಾರತೀಯ ಚಿತ್ರರಂಗದಲ್ಲೇ ಅಚ್ಚಿಳಿಯದ ಪ್ರಯೋಗಗಳಾಗಿದ್ದವು, ಅದೆಷ್ಟೋ ಚಿತ್ರಗಳು ರಜತಮಹೋತ್ಸವವನ್ನು ಕಂಡು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದವು.

ಆದರೆ ಪಂತುಲು ಅವರು ಎಂದಿಗೂ ಪ್ರಶಸ್ತಿಗಾಗಿ ಅಥವಾ ಸ್ವ ಪ್ರತಿಷ್ಠೆಗಾಗಿ ಚಿತ್ರಗಳನ್ನು ಮಾಡಿದವರಲ್ಲ, ‘ಶ್ರೀ ಕೃಷ್ಣ ದೇವರಾಯ’ ಚಿತ್ರದಲ್ಲಿ ತಾವು ನಟಿಸಿದ್ದ ‘ತಿಮ್ಮರಸು’ ಪಾತ್ರಕ್ಕೆ ‘ಶ್ರೇಷ್ಠ ನಟ’ ರಾಜ್ಯ ಪ್ರಶಸ್ತಿ ಬಂದಾಗ, ಚಿತ್ರದಲ್ಲಿ ತಮಗಿಂತಲೂ ಅತ್ಯುತ್ತಮವಾಗಿ ನಟಿಸಿರುವವರು ಡಾ||ರಾಜ್ ಕುಮಾರ್, ನ್ಯಾಯವಾಗಿ ಅವರಿಗೆ ಪ್ರಶಸ್ತಿ ಕೊಡಿ ಎಂದು ಹೇಳಿ, ಪ್ರಶಸ್ತಿಯನ್ನೇ ತಿರಸ್ಕರಿಸಿದ ವ್ಯಕ್ತಿತ್ವ ಪಂತುಲು ಅವರದ್ದು.

an observation by RAJ ARADHYA and SRIPADA STUDIOS

ಪಂತುಲು ಎಂಬ ಸಾರ್ವಕಾಲಿಕ ಸ್ಫೂರ್ತಿ :

ಪ್ರಸ್ತುತ ಕನ್ನಡ ಚಿತ್ರರಂಗವನ್ನೂ ಒಳಗೊಂಡಂತೆ ಇಡೀ ದಕ್ಷಿಣ ಭಾರತದ ಚಿತ್ರರಂಗವು ಬೆಳೆದು ಬೆಳಗುತ್ತಿರುವ ರೀತಿಯನ್ನು ಕಂಡು, ನಿಬ್ಬೆರಗಾಗಿ ಕೈ ತಟ್ಟುತ್ತಿದ್ದೇವೆ, ಆದರೆ ಚಿತ್ರರಂಗದ ಹಿನ್ನೆಲೆಯೇ ಇಲ್ಲದ ವ್ಯಕ್ತಿಯೊಬ್ಬ ಆಗಷ್ಟೇ ಕಣ್ಣು ಬಿಡುತ್ತಿದ್ದ ಚಿತ್ರೋದ್ಯಮವನ್ನು ಪ್ರವೇಶಿಸಿ, ಬಹುಭಾಷೆಯಲ್ಲಿ, ಬಹುತಾರಾಗಣದ, ಸರ್ವ ಕಾಲಕ್ಕೂ ಶ್ರೇಷ್ಠವೆನಿಸುವ ಚಿತ್ರಗಳನ್ನು ಭಾರತೀಯ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ, ಮುಖ್ಯವಾಗಿ ದಕ್ಷಿಣ ಭಾರತದ ಚಿತ್ರರಂಗವು ಎದೆಯುಬ್ಬಿಸಿ ಹೆಮ್ಮೆ ಪಡುವಂತಹ ಚಲನಚಿತ್ರಗಳನ್ನು ನೀಡಿರುವುದು ಚರಿತ್ರಾರ್ಹ ಸಂಗತಿ.

ಸಿನಿಮಾವನ್ನೇ ಧ್ಯಾನಿಸುತ್ತಿರುವ ಹಲವರಿಗೆ, ಇಂತಹ ದಿಗ್ಗಜರ ಬದುಕು ಸಾರ್ವಕಾಲಿಕ ಸ್ಫೂರ್ತಿ ಯಾಗಲೆಂಬುದೇ ಈ ಬರಹದ ಆಶಯ.

ಪಂತುಲು ಅವರು ನಿರ್ದೇಶಿಸಿ,ನಿರ್ಮಿಸಿದ ಹಲವು ಮೇರುಕೃತಿಗಳಲ್ಲಿ ಕೆಲವನ್ನು  ಹೆಸರಿಸಲಾಗಿದೆ, ನೋಡಲು ಮರೆಯದಿರಿ…

ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ವೀರಪಾಂಡಿಯ ಕಟ್ಟಬೊಮ್ಮನ್, ಕರ್ಣನ್, ಕಪ್ಪಲೂಟ್ಟಿಯ ತಮಿಳನ್, ಮಕ್ಕಳರಾಜ್ಯ, ಕಿತ್ತೂರು ಚೆನ್ನಮ್ಮ, ಆಯಿರತ್ತಿಲ್ ಒರುವನ್, ಶ್ರೀ ಕೃಷ್ಣ ದೇವರಾಯ, ಗಾಳಿ ಮೇದಲು, ಕಥಾನಾಯಕುನಿ ಕಥಾ.

Leave a Reply

Your email address will not be published. Required fields are marked *

Verified by MonsterInsights